ಸಿಯೋಲ್-
	ಇದು ದಕ್ಷಿಣ ಕೊರಿಯ ದೇಶದ ರಾಜಧಾನಿ ಹಾಗೂ ಅತ್ಯಂತ ದೊಡ್ಡ ನಗರ. ಪ್ರಪಂಚದ ಅತಿಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಎರಡನೆಯದು. ಜನಸಂಖ್ಯೆ 1,02,76,968 (2003). ಈ ನಗರ ದಕ್ಷಿಣ ಕೊರಿಯದ ಸಾಂಸ್ಕøತಿಕ, ಆರ್ಥಿಕ, ಶೈಕ್ಷಣಿಕ, ಹಣಕಾಸು, ಸರ್ಕಾರ, ಆಡಳಿತ ಮತ್ತು ಸಾಮಾಜಿಕ ಕೇಂದ್ರ.

	ಸಿಯೋಲ್ ನಗರ ಹ್ಯಾನ್ ನದಿ ಕಣಿವೆಯಲ್ಲಿದೆ. ನಗರದ ಕೇಂದ್ರಭಾಗದಲ್ಲಿ ಅನೇಕ ಸರ್ಕಾರಿ ಹಾಗೂ ವಾಣಿಜ್ಯ ಕಚೇರಿಗಳಿವೆ. ನಗರದ ಬಹುಪಾಲು ಜನರು ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಾರೆ. ಹ್ಯಾನ್ ನದಿ ದಡ ಹಾಗೂ ಯಾದೋ ದ್ವೀಪದಲ್ಲಿ ಹೆಚ್ಚಾಗಿ ಜನವಸತಿ ಕಂಡು ಬರುತ್ತದೆ. ದಕ್ಷಿಣ ಕೊರಿಯ ಸರ್ಕಾರ ನಗರದ ಹೊರವಲಯದಲ್ಲಿ ಕೈಗಾರಿಕೆಗಳು ಕಂಡುಬರುವ ಯಾಂಗ್‍ಡುಂಗ್ ಮತ್ತು ಮ್ಯಾವೊ ಭಾಗಗಳಲ್ಲಿ ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿದೆ.

	ಸಿಯೋಲ್ ಸಮಶೀತೋಷ್ಣ ವಲಯದಲ್ಲಿದೆ. ಇದರ ವಾರ್ಷಿಕ ಸರಾಸರಿ ಉಷ್ಣಾಂಶ 12.20ಸೆ. ಜನವರಿ ತಿಂಗಳಿನಲ್ಲಿ ಅತ್ಯಂತ ಕಡಿಮೆ ಸರಾಸರಿ -30ಸೆ. ಉಷ್ಣಾಂಶವಿರುತ್ತದೆ. ಅತಿ ಹೆಚ್ಚು ಉಷ್ಣಾಂಶ ಆಗಸ್ಟ್ ತಿಂಗಳಿನಲ್ಲಿ 250ಸೆ. ಸರಾಸರಿ ವಾರ್ಷಿಕ ಮಳೆ 1,344.2ಮಿಮೀ. ಮಾನ್ಸೂನ್‍ಕಾಲದ ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಹೆಚ್ಚು ಮಳೆಯಾಗುತ್ತದೆ.

	ಆರ್ಥಿಕತೆ: ವಾಣಿಜ್ಯ ಮತ್ತು ಕೈಗಾರಿಕೆಗಳು ಸಿಯೋಲ್ ನಗರದ ಪ್ರಮುಖ ಆರ್ಥಿಕ ಚಟುವಟಿಕೆಗಳು. ಜವಳಿ, ಯಂತ್ರೋಪಕರಣ, ರಾಸಾಯನಿಕ ವಸ್ತುಗಳು, ಪಾನೀಯ ಹಾಗೂ ಆಹಾರವಸ್ತು ಸಂಸ್ಕರಣ, ಮೋಟಾರು ವಾಹನಗಳು, ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣ ತಯಾರಿಕೆಯಂಥ ಪ್ರಮುಖ ಕೈಗಾರಿಕೆಗಳಿವೆ.

	ಸಾರಿಗೆ: ಸಿಯೋಲ್ ಉತ್ತಮ ರಸ್ತೆ ವ್ಯವಸ್ಥೆ ಹೊಂದಿದೆ. ಉತ್ತರ ಮತ್ತು ದಕ್ಷಿಣ ಕೊರಿಯ ಯುದ್ಧವಾದ ಅನಂತರ ರಸ್ತೆಮಾರ್ಗಗಳನ್ನು ಅಭಿವೃದ್ಧಿಪಡಿಸಲಾಯಿತು. ಸುಮಾರು ಒಂದು ಡಜನ್ ಸೇತುವೆಗಳನ್ನು ನಿರ್ಮಿಸಲಾಯಿತು. ಆದರೂ ಇಲ್ಲಿನ ದಟ್ಟ ಜನಸಂದಣಿಗೆ ಸಾಕಷ್ಟು ಸವಲತ್ತು ಲಭ್ಯವಿಲ್ಲ. ಸಿಯೋಲ್ ನಗರ ರೈಲುಮಾರ್ಗಗಳ ಕೇಂದ್ರ. ಇಲ್ಲಿಂದ ಪ್ರಮುಖ ನಗರಗಳಿಗೂ ಬಂದರುಗಳಿಗೂ ಸಂಪರ್ಕವೇರ್ಪಟ್ಟಿದೆ. ಸಾರಿಗೆ ಒತ್ತಡವನ್ನು ಕಡಿಮೆಗೊಳಿಸುವ ಸಲುವಾಗಿ ಭೂಗತ ರೈಲುಮಾರ್ಗಗಳನ್ನು ನಿರ್ಮಿಸಲಾಗಿದೆ. ಹ್ಯಾನ್‍ನದಿಯ ದಡದಲ್ಲಿರುವ ಇಂಚೊನ್ ಇಲ್ಲಿಯ ಬಂದರು. ಪಶ್ಚಿಮ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ರಾಷ್ಟ್ರದ ವಾಯುಸಾರಿಗೆ ಕೇಂದ್ರ.

	ಸಾಂಸ್ಕøತಿಕ ಜೀವನ: ಬೌದ್ಧ, ಕ್ರಿಶ್ಚಿಯನ್ ಹಾಗೂ ಕನ್‍ಫ್ಯೂಶಿಯನಿಸಮ್ ಧರ್ಮದ ಜನರಿದ್ದಾರೆ. ರಾಷ್ಟ್ರದ ವಿಜ್ಞಾನ ಮತ್ತು ಕಲಾ ಶೈಕ್ಷಣಿಕ ಕೇಂದ್ರಗಳು, ರಾಷ್ಟ್ರೀಯ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳು ಇಲ್ಲಿವೆ. ಸೆಚೂಂಗ್ ಕೇಂದ್ರ ನಾಟಕ, ನಾಟ್ಯ, ವಸ್ತುಪ್ರದರ್ಶನ ಮುಂತಾದವುಗಳ ಸ್ಥಳ. ಈ ನಗರದಲ್ಲಿ ಸುಂದರ ಉದ್ಯಾನಗಳಿವೆ. 1988ರಲ್ಲಿ ಈ ನಗರದಲ್ಲಿ ಪ್ರಪಂಚವಿಖ್ಯಾತ ಒಲಂಪಿಕ್ಸ್ ಕ್ರೀಡೆಯನ್ನು ನಡೆಸಲಾಯಿತು.

	ಇತಿಹಾಸ: ಯಿ ಸಂತತಿಯ ರಾಜಧಾನಿಯಾಗಿದ್ದ (1392-1910) ಇದು ಜಪಾನ್ ಆಳಿಕೆಯಲ್ಲಿ ಆಧುನೀಕರಣಕ್ಕೊಳಪಟ್ಟಿತು (1910-45). ಅಮೆರಿಕ ಮಿಲಿಟರಿ ಸರ್ಕಾರದ ರಾಜಧಾನಿಯಾಗಿ (1945) 1948 ಆಗಸ್ಟ್ 15 ರಂದು ದಕ್ಷಿಣ ಕೊರಿಯದ ರಾಜಧಾನಿಯಾಯಿತು. ಕೊರಿಯನ್ ಯುದ್ಧದಲ್ಲಿ (1950-53) ಕಮ್ಯೂನಿಸ್ಟರ ವಶವಾಗಿ ಅಪಾರ ಹಾನಿಗೀಡಾಯಿತು. 1953ರಿಂದ ಪುನರ್ನಿರ್ಮಾಣ ನಡೆದೇ ಇದೆ.			
		(ವಿ.ಆರ್.; ಸಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ